ನಟೇಶನ್, ಜಿ ಎ
1873-1949. ತಮಿಳು ನಾಡಿನ ಒಬ್ಬ ಉದಾರವಾದಿ ರಾಷ್ಟ್ರಪ್ರೇಮಿ, ಪತ್ರಿಕೋದ್ಯಮಿ, ಪ್ರಕಾಶಕ. 1873ರ ಆಗಸ್ಟ್ 24ರಂದು ತಮಿಳು ನಾಡಿನ ತಂಜಾವೂರು ಜಿಲ್ಲೆಯ ಗಣಪತಿ ಅಗ್ರಹಾರಂ ಎಂಬ ಹಳ್ಳಿಯಲ್ಲಿ ಜನಿಸಿದರು. ಕುಂಭಕೋಣಂನ ಪ್ರೌಢಶಾಲೆಯಲ್ಲೂ ತಿರುಚಿರಪ್ಪಳ್ಳಿಯ ಸೇಂಟ್ ಜೋಸೆಫ್ ಮತ್ತು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜುಗಳಲ್ಲೂ ಓದಿ 1897ರಲ್ಲಿ ಪದವೀಧರರಾದರು. ಅಣ್ಣ ವೈದ್ಯ ರಾಮನರು ಇವರಿಗೆ ಮದರಾಸ್ ಟೈಮ್ಸ್‍ನ ಗ್ಲಿನ್ ಬ್ಯಾರ್ಲೋ ಎಂಬ ಐರಿಷ್ ಸಂಪಾದಕರ ಅಡಿಯಲ್ಲಿ ಪತ್ರಿಕೋದ್ಯಮದಲ್ಲಿ ತರಬೇತು ಕೊಡಿಸಿದರು.

 	ನಟೇಶನ್ ಅಣ್ಣನ ಸಂಸ್ಥೆಯನ್ನು ಸೇರಿ ಭಾರತೀಯ ಪುನರುಜ್ಜೀವನಕ್ಕೆ ಸಂಬಂಧಿಸಿದ ಗ್ರಂಥ ಪ್ರಕಾಶನ ಕಾರ್ಯದಲ್ಲಿ ವಿಶೇಷ ಆಸ್ಥೆ ವಹಿಸಿದರು. ರಾಷ್ಟ್ರಾಭಿಮಾನ ದೃಷ್ಟಿಯ ವಿಚಾರಗಳ ಪ್ರಚಾರದಲ್ಲಿ ತೊಡಗಿದರು. ಇದು ದೇಶದ ಗಮನ ಸೆಳೆಯಿತು. ಇದರಿಂದ ಪ್ರೋತ್ಸಾಹಿತರಾದ ನಟೇಶನ್ ತಮ್ಮ ಅಣ್ಣನೊಂದಿಗೆ `ಇಂಡಿಯನ್ ಪಾಲಿಟಿಕ್ಸ್ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೂ ಭಾರತಕ್ಕೆ ಸ್ವಾತಂತ್ರ್ಯ ನೀಡುವಂತೆ ಬ್ರಿಟಿಷ್ ಪ್ರಜಾಪ್ರಭುತ್ವದ ಮೇಲೆ ಪ್ರಭಾವ ಬೀರುವುದೂ ಇದರ ಉದ್ದೇಶಗಳಾಗಿದ್ದವು. ಇವರು ದೇಶದ ಅನೇಕ ಪ್ರಮುಖರ ಭಾಷಣಗಳನ್ನೂ ಟೀಕೆಗಳನ್ನೂ ಜೀವನಚರಿತ್ರೆಗಳನ್ನೂ ಪ್ರಕಟಿಸಿದರು. 1900ರಲ್ಲಿ ಇವರಿಂದ ಇಂಡಿಯನ್ ರಿವ್ಯೂ ಎಂಬ ಪತ್ರಿಕೆ ಆರಂಭವಾಯಿತು. ಇಂಗ್ಲೆಂಡಿನ ರಿವ್ಯೂ ಆಫ್ ರಿವ್ಯೂಸ್ ಎಂಬ ಪತ್ರಿಕೆಯ ಮಾದರಿಯಲ್ಲಿ ಪ್ರಕಟವಾಗುತ್ತಿದ್ದ ಈ ಪತ್ರಿಕೆ ಭಾರತೀಯ ಬುದ್ಧಿ ಜೀವಿಗಳ ಚಿಂತನದ ಕನ್ನಡಿಯಾಗಿತ್ತು. ಆರ್.ಸಿ. ದತ್, ಗೋಖಲೆ, ಆ್ಯನಿ ಬೆಸಂಟ್, ಸಿ.ಎಫ್. ಆಂಡ್ರ್ಯೂಸ್, ಮಹಾತ್ಮ ಗಾಂಧಿ ಮೊದಲಾದವರು ಇದಕ್ಕೆ ಬರೆಯುತ್ತಿದ್ದರು. 1916ರಲ್ಲಿ ಮಹಾತ್ಮ ಗಾಂಧಿಯವರನ್ನು ಮದರಾಸಿಗೆ ಬರಮಾಡಿಕೊಂಡು ಅವರನ್ನು ತಮಿಳುನಾಡಿಗೆ ಪರಿಚಯ ಮಾಡಿಕೊಟ್ಟವರು ಜಿ.ಎ. ನಟೇಶನ್. ಇವರ ಪ್ರಯತ್ನದಿಂದಾಗಿ ತಮಿಳುನಾಡಿನ ಅನೇಕ ಬುದ್ಧಿಜೀವಿಗಳೂ ರಾಜಕಾರಣಿಗಳೂ ಗಾಂಧಿಯವರ ಪ್ರಭಾವಕ್ಕೆ ಒಳಗಾದರು.

 	ಜಿ.ಎ. ನಟೇಶನ್ ರಾಜಕಾರಣದಲ್ಲಿ ತೀವ್ರವಾದಿಯಾಗಿರಲಿಲ್ಲ. ಗಾಂಧಿಯವರ ಸತ್ಯಾಗ್ರಹ ಚಳವಳಿಯನ್ನು ಇವರು ಒಪ್ಪಲಿಲ್ಲ. ಆದರೂ ಇವರ ಮತ್ತು ಗಾಂಧೀಜಿಯವರ ನಡುವೆ ಸ್ನೇಹ ಮತ್ತು ಗೌರವ ಭಾವನೆಗಳೇ ಇದ್ದುವು. ಇಂಡಿಯನ್ ಲಿಬರಲ್ ಫೆಡರೇಶನ್ನಿಗೆ ಇವರು ಪ್ರಥಮ ಮಹಾಕಾರ್ಯದರ್ಶಿಯಾಗಿದ್ದರು. ಅನಂತರ ಲಿಬರಲ್ ಪಕ್ಷದ ಮದರಾಸ್ ಶಾಖೆಯ ಖಾಯಂ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ 10 ವರ್ಷಗಳ ಕಾಲ ರಾಜ್ಯಸಭೆಯ ನಾಮಕರಣ ಸದಸ್ಯರಾಗಿದ್ದರು. ಇವರು ಮದರಾಸ್ ಕಾರ್ಪೋರೇಶನ್ನಿನ ಸದಸ್ಯರು, ಮದರಾಸ್ ವಿಶ್ವವಿದ್ಯಾನಿಲಯದ ಫೆಲೋ, ಮತ್ತು ಅದರ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರು ಆಗಿದ್ದರು. ಬ್ರಿಟಿಷ್ ಸರ್ಕಾರ ಇವರಿಗೆ ರಾವ್ ಬಹದ್ದೂರ್ ಎಂಬ ಬಿರುದನ್ನು ನೀಡಿತ್ತು. 1935ರಲ್ಲಿ ಇವರು ಮದರಾಸಿನ ಶರೀಫರಾಗಿದ್ದರು. ಅಲ್ಲದೆ ಬಕಿಂಗ್‍ಹ್ಯಾಮ್ ಮತ್ತು ಕರ್ನಾಟಕ ಮಿಲ್‍ನ ನಿರ್ದೇಶಕರಾಗಿ ಅಲ್ಲಿಯ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಯಶಸ್ವಿಯಾದರು. 1935ರಲ್ಲಿ ಇಂಡಿಯನ್ ಟ್ಯಾರಿಫ್ ಬೋರ್ಡ್‍ನ ಪೂರ್ಣಾವಧಿಯ ಸದಸ್ಯರಾಗಿ ನೇಮಕಗೊಂಡರು. ಭಾರತದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪ್ರತಿಪಾದಿಸಿದರು. 1920ರಲ್ಲಿ ಕೆನಡದಲ್ಲಿ ನಡೆದ ಎಂಪೈರ್ ಪಾರ್ಲಿಮೆಂಟರಿ ಸಂಘದ ಸಮಾವೇಶದಲ್ಲಿ ಭಾಗವಹಿಸಿದ ಭಾರತೀಯ ನಿಯೋಗದ ಸದಸ್ಯರಲ್ಲಿ ನಟೇಶನರೂ ಒಬ್ಬರಾಗಿದ್ದರು.

 	ಜಿ.ಎ. ನಟೇಶನರ ಮಿತ್ರವರ್ಗದಲ್ಲಿ ವಿಭಿನ್ನ ಅಭಿಪ್ರಾಯಗಳ ಜನರಿದ್ದರು. ಅವರೊಬ್ಬ ಉದಾರವಾದಿ, ಮಾನವತಾವಾದಿ. ಸಂಸ್ಕøತದಲ್ಲಿ ಪರಿಣತರು. ಇಂಗ್ಲಿಷ್ ಶಿಕ್ಷಣ ಪಡೆದ ಇವರು ಆಚಾರಶೀಲರಾದರೂ ವಿಶಾಲಮನೋಭಾವವುಳ್ಳವರಾಗಿದ್ದರು. ಹರಿಜನರ ಉದ್ಧಾರಕ್ಕಾಗಿಯೂ ಸಾಮಾಜಿಕ ಅಸಮತೆಯ ನಿರ್ಮೂಲನಕ್ಕಾಗಿಯೂ ದುಡಿಯುತ್ತಿದ್ದರು. ಐ.ಸಿ.ಎಸ್. ಪರೀಕ್ಷೆಯನ್ನು ಭಾರತದಲ್ಲೂ ನಡೆಸುವಂತಾದದ್ದಕ್ಕೆ ಇವರು ನಡೆಸಿದ ಹೋರಾಟವೂ ಕಾರಣ.

 	1900ರಿಂದ ಸುಮಾರು ಐವತ್ತು ವರ್ಷಗಳ ಕಾಲ ದಿ ಇಂಡಿಯನ್ ರಿವ್ಯೂನ ಸಂಪಾದಕರಾಗಿ ಇವರು ರಾಷ್ಟ್ರದ ಅನೇಕ ಸಮಸ್ಯೆಗಳತ್ತ ಜನರ ಗಮನ ಸೆಳೆಯುತ್ತಿದ್ದರಲ್ಲದೆ ಸಾರ್ವಜನಿಕ ಜೀವನದಲ್ಲಿ ಮಾನವನ ಘನತೆ ಮತ್ತು ಮೌಲ್ಯಗಳ ಮಹತ್ತ್ವವನ್ನು ಎತ್ತಿ ಹಿಡಿದರು. ಇವರು 1949ರ ಜನವರಿ 10ರಂದು ನಿಧನ ಹೊಂದಿದರು. 					(ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ